ದಾವಣಗೆರೆ
ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಒಂದು ತಾಲ್ಲೂಕು; ಉಪವಿಭಾಗ; ತಾಲ್ಲೂಕು ಹಾಗೂ ಉಪವಿಭಾಗದ ಆಡಳಿತ ಕೇಂದ್ರ. ಉತ್ತರದಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು, ಪೂರ್ವದಲ್ಲಿ ಜಗಳೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳು, ದಕ್ಷಿಣದಲ್ಲಿ ಹೊಳಲ್ಕೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕುಗಳು, ಪೂರ್ವದಲ್ಲಿ ಹರಿಹರ ತಾಲ್ಲೂಕು- ಇವು ದಾವಣಗೆರೆ ತಾಲ್ಲೂಕಿನ ಮೇರೆಗಳು. ಉ. ಅ. 140 13- 140 38 ಮತ್ತು ಪೂ. ರೇ. 750 38 - 10 ನಡುವೆ ಇರುವ ಈ ತಾಲ್ಲೂಕಿನ ವಿಸ್ತೀರ್ಣ 945.6 ಚ.ಕಿಮೀ. (365.1 ಚ. ಮೈ.); ಜನಸಂಖ್ಯೆ 2,76,747. (1971). ತಾಲ್ಲೂಕಿನಲ್ಲಿ ದಾವಣಗೆರೆ, ಮಾಯಕೊಂಡ ಮತ್ತು ಅನಿಗೋಡು ಹೋಬಳಿಗಳೂ ಜನವಸತಿಯುಳ್ಳ 152 ಗ್ರಾಮಗಳೂ ದಾವಣಗೆರೆ ನಗರವೂ ಮಾಯಕೊಂಡ ಪಟ್ಟಣವೂ ಇವೆ.

ತಾಲ್ಲೂಕಿನ ನೆಲ ಸಾಮಾನ್ಯವಾಗಿ ಮೈದಾನ. ಇದು ಸ್ಥೂಲವಾಗಿ ಹರಿಹರ ತಾಲ್ಲೂಕಿನ ಪಶ್ಚಿಮದ ಅಂಚಿನಲ್ಲಿ ಹರಿಯುವ ತುಂಗಭದ್ರಾ ನದಿಯ ಕಡೆಗೆ ಇಳಿಜಾರಾಗಿದೆ. ತಾಲ್ಲೂಕಿನ ಪೂರ್ವಭಾಗದಲ್ಲಿ ಬೆಟ್ಟಗಳ ಸಾಲೊಂದಿದೆ. ತಾಲ್ಲೂಕಿನ ಪಶ್ಚಿಮದ ಕಡೆಗೆ ಸ್ಯಾಗಲಹಳ್ಳ ಎಂಬ ಹೊಳೆ ಈ ತಾಲ್ಲೂಕಿನ ಮೂಲಕ ಹರಿದು ಹರಿಹರ ತಾಲ್ಲೂಕಿನಲ್ಲಿ ತುಂಗಭದ್ರೆಯನ್ನು ಕೂಡುತ್ತದೆ. ಪಶ್ಚಿಮದ ಕಡೆ ಸ್ವಲ್ಪ ಭಾಗ ನೆ¯ ಕಪ್ಪು ಮಣ್ಣಿನಿಂದ ಕೂಡಿದೆಯಾದರೂ ಉಳಿದ ಕಡೆ ಕಾಣಬರುವುದು ಸಾಧಾರಣವಾದ ಕೆಂಪು ಮಣ್ಣು. ಇದು ಅಷ್ಟೇನೂ ಫಲವತ್ತಾದುದಲ್ಲ. ಅಲ್ಲಲ್ಲಿ ಇದು ನುರುಜುಗಲ್ಲಿನಿಂದ ಕೂಡಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಆಗುವ ವಾರ್ಷಿಕ ಸರಾಸರಿ ಮಳೆ 639.9 ಮಿಮೀ.

ತಾಲ್ಲೂಕಿನ ಒಟ್ಟೂ 2,36,382 ಎಕರೆ ನೆಲದಲ್ಲಿ 5,787 ಎಕರೆಗಳಷ್ಟು ನೆಲ ಅರಣ್ಯವೃತ್ತವಾದ್ದು ; 996 ಎಕರೆ ನೆಲ ತೋಪುಗಳಿಂದ ಕೂಡಿದ್ದು; 13,086 ಎಕರೆ ಗೋಮಾಳ; 4,087 ಎಕರೆ ಬಂಜರು; 3,603 ಎಕರೆ ಸಾಗುವಳಿಗೆ ಅರ್ಹವಾದ ಬೀಳು ಜಮೀನು. ವಾಸ್ತವವಾಗಿ ಸಾಗುವಳಿಗೆ ಒಳಪಟ್ಟಿರುವ ನೆಲ 1,67,895 ಎಕರೆ. ಇದರಲ್ಲಿ 4,210 ಎಕರೆ ನೆಲಕ್ಕೆ ಕೆರೆಗಳಿಂದಲೂ 2,905 ಎಕರೆಗಳಿಗೆ ಬಾವಿಗಳಿಂದಲೂ 1,196 ಎಕರೆ ಜಮೀನಿಗೆ ಇತರ ಮೂಲಗಳಿಂದಲೂ ನೀರಾವರಿ ಸೌಲಭ್ಯವಿದೆ. ಉಳಿದ ಜಮೀನಿನ ಸಾಗುವಳಿಗೆ ಮಳೆಯನ್ನೇ ಅವಲಂಬಿಸಬೇಕಾಗಿದೆ. 

ತಾಲ್ಲೂಕಿನ ಅತ್ಯಂತ ಮುಖ್ಯ ಆಹಾರ ಬೆಳೆ ಜೋಳ. 51,230 ಎಕರೆ ನೆಲದಲ್ಲಿ ಮುಂಗಾರಿ ಬೆಳೆಯನ್ನೂ 4,220 ಎಕರೆಗಳಲ್ಲಿ ಹಿಂಗಾರಿ ಬೆಳೆಯನ್ನೂ ತೆಗೆಯುತ್ತಾರೆ. ರಾಗಿ ಬೆಳೆಗೆ ಒಳಪಟ್ಟಿರುವ ಜಮೀನಿನ ವಿಸ್ತೀರ್ಣ 27,850 ಎಕರೆ. 1,800 ಎಕರೆಗಳಲ್ಲಿ ಭತ್ತ ಬೆಳೆಯುತ್ತದೆ. 5,050 ಎಕರೆಗಳಲ್ಲಿ ತೊಗರಿಯೂ 750 ಎಕರೆಗಳಲ್ಲಿ ಕಡಲೆಯೂ ಬೆಳೆಯುತ್ತವೆ.  ಆಹಾರೇತರ ಬೆಳೆಗಳಲ್ಲಿ ಅತ್ಯಂತ ಮುಖ್ಯವಾದ್ದು ಹತ್ತಿ (18,800 ಎಕರೆ). ಇನ್ನೊಂದು ಮುಖ್ಯ ಬೆಳೆ ಎಣ್ಣೆ ಬೀಜ (27,475 ಎಕರೆ). ನೆಲಗಡಲೆ ಪ್ರಧಾನವಾದ ಬೆಳೆ. 

ದಾವಣಗೆರೆ ಹತ್ತಿ ಬೆಳೆಯುವ ಪ್ರದೇಶದ ನಡುವೆ ಇರುವುದರಿಂದ ಇಲ್ಲಿ ಹತ್ತಿಜವಳಿ ಕೈಗಾರಿಕೆ ಬೆಳೆದಿದೆ. ಗಿರಣಿಗಳ ಜೊತೆಗೆ ಕೈಮಗ್ಗಗಳೂ ಇವೆ. ದಾವಣಗೆರೆಯಲ್ಲಿರುವ ಗಿರಣಿಗಳ ಸಂಖ್ಯೆ 8. ಹತ್ತಿ ಹಿಂಜುವ ಮತ್ತು ಚಪ್ಪಟೆ ಮಾಡುವ ಕಾರ್ಖಾನೆಗಳೂ ಇವೆ. ದಾವಣಗೆರೆಯ ಕಂಬಳಿಗಳು ತುಂಬಾ ಪ್ರಸಿದ್ಧ. ಇತರ ಕೈಗಾರಿಕೆಗಳು ಎಣ್ಣೆ ತಯಾರಿಕೆ, ನೆಲಗಡಲೆ ಬಿಡಿಸುವುದು, ಕೃಷಿ ಉಪಕರಣ ತಯಾರಿಕೆ, ಪಾದರಕ್ಷೆ ತಯಾರಿಕೆ, ಇತ್ಯಾದಿ. ದಾವಣಗೆರೆ ತಾಲ್ಲೂಕಿನ ಮೂಲಕ ಬೆಂಗಳೂರು-ಮಿರಜ್ ರೈಲು ಮಾರ್ಗ ಸಾಗುತ್ತದೆ. ದಾವಣಗೆರೆ ಮತ್ತು ಮಾಯಕೊಂಡ ಪ್ರಮುಖ ನಿಲ್ದಾಣಗಳು. ರಾಷ್ಟ್ರೀಯ ಹೆದ್ದಾರಿಯೂ ಇತರ ರಸ್ತೆಗಳೂ ಇವೆ.

ದಾವಣಗೆರೆ ನಗರವಲ್ಲದೇ ತಾಲ್ಲೂಕಿನ ಇತರ ಪ್ರಮುಖ ಐತಿಹಾಸಿಕ ಸ್ಥಳಗಳು ಇವು: ದಾವಣಗೆರೆ ನಗರದ ಆಗ್ನೇಯಕ್ಕೆ 10 ಮೈ. ದೂರದಲ್ಲಿ ಇರುವ ಸ್ಥಳ ಅನಿಗೋಡು. ಇಲ್ಲಿರುವ ಸಿದ್ಧೇಶ್ವರ ದೇವಸ್ಥಾನ 11ನೆಯ ಶತಮಾನದ ತ್ರಿಕೂಟಾಚಲ ಮಾದರಿಯದು. ದಾವಣಗೆರೆಗೆ 12 ಮೈ. ಪೂರ್ವಕ್ಕೆ ದಾವಣಗೆರೆ - ಜಗಳೂರು ರಸ್ತೆಯಲ್ಲಿರುವ ಗ್ರಾಮ ಅಣಜಿ. ಇಲ್ಲಿ ಸು. 450ರ ಕದಂಬ ಶಾಸನವೊಂದು ಸಿಕ್ಕಿದೆ. ಈ ಗ್ರಾಮದ ಪಕ್ಕದಲ್ಲಿರುವ ಬೆಟ್ಟದಲ್ಲಿ ಮಣ್ಣಿನ ಕೋಟೆಯ ಉಳಿಕೆಗಳಿವೆ. ಅದರ ನೆತ್ತಿನ ಮೇಲೆ ಪಾಳೆಗಾರರ ಕಾಲದ ಮಂಟಪವೊಂದಿದೆ. ಅದನ್ನು ಯಾದವರ ಕಾಲದ ಹಳೆಯ ಕಂಬಗಳ ಮೇಲೆ ನಿರ್ಮಿಸಲಾಗಿದೆ. ಇದರ ಹಿಂದಣ ಅಂಕಣದಲ್ಲಿ ಯೋಗಾನರಸಿಂಹ ಗುಡಿಯಿದೆ. ಆನೇಕೊಂಡ ದಾವಣಗೆರೆಗೆ 2 ಮೈ. ದೂರದಲ್ಲಿದೆ. ಇಲ್ಲಿ ಹೊಯ್ಸಳ ಮಾದರಿಯ ಸಣ್ಣ ಸುಂದರ ಈಶ್ವರ ದೇಗುಲವಿದೆ. ಬಾಡ ಎಂಬುದು 11-12ನೆಯ ಶತಮಾನಗಳಲ್ಲಿ ಉಚ್ಛ್ರಾಯಸ್ಥಿತಿಯಲ್ಲಿದ್ದ ಒಂದು ಅಗ್ರಹಾರವಾಗಿತ್ತು. ಈ ಗ್ರಾಮದ ಪೂರ್ವಕ್ಕೆ ತ್ರಿಕೂಟಾಚಲ ಮಾದರಿಯ ದೇವಾಲಯದ ಪಳೆಯುಳಿಕೆಗಳಿವೆ. ಹಡದಿ ಎಂಬುದು ಇನ್ನೊಂದು ಪ್ರಾಚೀನ ಸ್ಥಳ. ಇಲ್ಲಿ 11ನೆಯ ಶತಮಾನದ ಶಾಸನಗಳು ಸಿಕ್ಕಿವೆ. ಇದರ ಸನಿಹದಲ್ಲಿ ಪ್ರಾಚೀನ ಸ್ಮಾರಕಗಳು ನೆಲದಲ್ಲಿ ಹುದುಗಿರಬಹುದು. ಮಾಯಕೊಂಡಕ್ಕೆ ಈಶಾನ್ಯದಲ್ಲಿ 4 ಮೈ. ದೂರದಲ್ಲಿರುವ ಕಬ್ಬೂರು 12ನೆಯ ಶತಮಾನದಲ್ಲಿ ಒಂದು ಅಗ್ರಹಾರವಾಗಿತ್ತು. ಹಳೆಯ ಕೋಟೆ ಉರುಳಿ ಹೋಗಿದೆ. ಬಳಿಯ ದಿಬ್ಬವೇ ಹಳೆಯ ವಿಮುಕ್ತೇಶ್ವರ ದೇಗುಲದ ನಿವೇಶನವಿರಬಹುದೆಂದು ಊಹಿಸಲಾಗಿದೆ. ಕೊಡಗನೂರಿನಲ್ಲಿ 976ರ ಶಾಸನವಿದೆ. ಇಲ್ಲಿಯ ಹಳೆಯ ದೇಗುಲಗಳು ಪಾಳುಬಿದ್ದಿವೆ. ದಾವಣಗೆರೆಯ ಆಗ್ನೇಯಕ್ಕೆ 8 ಮೈ. ದೂರದಲ್ಲಿರುವ ಕೊಗ್ಗನೂರಿನ ಈಶ್ವರ ದೇವಸ್ಥಾನ 11ನೆಯ ಶತಮಾನದ್ದು. ಲೋಕಿಕೆರೆ ಎಂಬುದು ಚಾಳುಕ್ಯರ ಕಾಲದಲ್ಲಿ ಅಗ್ರಹಾರವಾಗಿತ್ತು. ಇಲ್ಲಿ ಹಲವು ದೇವಸ್ಥಾನಗಳಿವೆ. ವಳುಲ್ಕೆರಿ ಎಂಬುದೂ ಒಂದು ಅಗ್ರಹಾರವಾಗಿತ್ತು. ಇಲ್ಲಿ ಸು. 1701ರ ಈಶ್ವರ ದೇವಸ್ಥಾನವಿದೆ. ಮಾಯಕೊಂಡ ಎಂಬುದು ಇದೇ ಹೆಸರಿನ ಹೋಬಳಿಯ ಕೇಂದ್ರ. ಇದೊಂದು ರೈಲ್ವೆ ನಿಲ್ದಾಣ. ಇಲ್ಲಿರುವ ಕೇಶವ ದೇವಸ್ಥಾನ ವಿಜಯನಗರ ಕಾಲದ ಕಟ್ಟದಂತೆ ಕಾಣುತ್ತದೆ. ಓಬಲ ನರಸಿಂಹ ದೇವಾಲಯ ಇನ್ನೊಂದು. ಮಾಯಕೊಂಡದ ಬಳಿಯ ಶಂಕರನಹಳ್ಳಿಯಲ್ಲಿ ರಂಗನಾಥಸ್ವಾಮಿಯ ದೇವಾಲಯವಿದೆ. 

ದಾವಣಗೆರೆ ಉಪವಿಭಾಗಕ್ಕೆ ದಾವಣಗೆರೆ, ಜಗಳೂರು, ಹೊಸದುರ್ಗ, ಹೊಳಲ್ಕೆರೆ ಮತ್ತು ಹರಿಹರ ತಾಲ್ಲೂಕುಗಳು ಸೇರಿವೆ. ಇದರ ಒಟ್ಟು ವಿಸ್ತೀರ್ಣ 10,802,6 ಚ.ಕಿಮೀ. (4,170.9 ಚ.ಮೈ.)

ದಾವಣಗೆರೆ ನಗರ ಈ ತಾಲ್ಲೂಕಿನ ಹಾಗೂ ಉಪವಿಭಾಗದ ಆಡಳಿತ ಕೇಂದ್ರ. ಚಿತ್ರದುರ್ಗದ ವಾಯುವ್ಯಕ್ಕೆ 38 ಮೈ. ದೂರದಲ್ಲಿ ಉ. ಅ. 140 28 ಮತ್ತು ಪೂ. ರೇ. 750 59 ಮೇಲೆ ಇದೆ. ಜನಸಂಖ್ಯೆ 1,21,110 (1971). ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಪಟ್ಟಣ. ಕರ್ನಾಟಕ ರಾಜ್ಯದ ನಗರಗಳಲ್ಲೊಂದು. ಬೆಂಗಳೂರು-ಮಿರಜ್ ರೈಲುಮಾರ್ಗದ ಒಂದು ಪ್ರಮುಖ ನಿಲ್ದಾಣ. ಬೆಂಗಳೂರಿನಿಂದ ಬರುವ ಹೆದ್ದಾರಿ ಇದರ ಮೂಲಕ ಹಾದು ಹೋಗುತ್ತದೆ. ಇದೊಂದು ಪ್ರಮುಖ ಕೈಗಾರಿಕಾ ಕೇಂದ್ರ ಹಾಗೂ ವ್ಯಾಪಾರ ಸ್ಥಳ. ಇಲ್ಲಿ ಅನೇಕ ನೆಲಗಡಲೆ ಎಣ್ಣೆ ಗಿರಣಿಗಳೂ ವನಸ್ಪತಿ ಕಾರ್ಖಾನೆಗಳೂ ಹತ್ತಿ ಗಿರಣಿಗಳೂ ಅರಳೆ ಹಿಂಜುವ ಹಾಗೂ ಚಪ್ಪಟೆ ಮಾಡುವ ಕಾರ್ಖಾನೆಗಳೂ ಇವೆ. ನಗರದ ಆಡಳಿತಕ್ಕೆ ಪೌರ ಸಭೆಯೊಂದುಂಟು. ಇದೊಂದು ಶಿಕ್ಷಣ ಕೇಂದ್ರ ಕೂಡ. ಎಂಜಿನಿಯರಿಂಗ್, ವೈದ್ಯಕೀಯ, ಮಾನವಿಕ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳಲ್ಲದೆ ಶಿಕ್ಷಣ ಕಾಲೇಜೂ ಉಪಾಧ್ಯಾಯ ತರಬೇತಿ ಕಾಲೇಜೂ ವಿವಿಧ ತಾಂತ್ರಿಕ ಶಾಲೆಯೂ ಇವೆ. ಇವುಗಳೆಲ್ಲ ಇರುವುದು ನಗರದ ಪಶ್ಚಿಮ ಭಾಗದಲ್ಲಿ. ಹತ್ತಿ ಗಿರಣಿಗಳು ನಗರದ ದಕ್ಷಿಣ ಭಾಗದಲ್ಲಿವೆ. ಈ ಎರಡೂ ದಿಕ್ಕುಗಳಲ್ಲಿ ನಗರ ಬೆಳೆಯುತ್ತಿದೆ. ದೊಡ್ಡ ಕಟ್ಟಡಗಳಿಂದ, ವಿಶಾಲ ರಸ್ತೆಗಳಿಂದ ಹೊಸ ವಿಸ್ತರಣಗಳಿಂದ ಹಸಿರು ಉದ್ಯಾನಗಳಿಂದ ಜನನಿಬಿಡತೆಯಿಂದ ಕೂಡಿ ಈ ನಗರ ಸುಂದರವಾಗಿದೆ. ನಗರದ ಪಶ್ಚಿಮ ಎಲ್ಲೆಯ ಬಳಿ ಚಿಗಟೇರಿ ಸಾರ್ವಜನಿಕ ಆಸ್ಪತ್ರೆ, ಕ್ಷಯರೋಗದ ಆಸ್ಪತ್ರೆ ಇವೆ. 

ದಾವಣಗೆರೆ ಮೊದಲು ಒಂದು ಸಣ್ಣ ಹಳ್ಳಿಯಾಗಿತ್ತು. ಇದು ಬೇತೂರಿನ (ಬೆಟ್ಟೂರು) ಹೊರಭಾಗವಾಗಿತ್ತು. ಹೈದರ್ ಆಲಿ ಇದನ್ನು ಅಪ್ಪಾಜಿರಾಮ್ ಎಂಬ ಮರಾಠಾ ಪಾಳೆಯಗಾರನಿಗೆ ಕೊಟ್ಟ. ಅಪ್ಪಾಜಿರಾಮ್‍ನ ಪ್ರೋತ್ಸಾಹದಿಂದಾಗಿ ಇಲ್ಲಿ ಅನೇಕ ವರ್ತಕರು ನೆಲೆಸಿದರು. ವ್ಯಾಪಾರ ಬೆಳೆಯಿತು. ಅಪ್ಪಾಜಿರಾಮನ ಅನಂತರವೂ ದಾವಣಗೆರೆ ಪಟ್ಟಣ ಬೆಳೆಯಿತು. ಟಿಪ್ಪು ಇದಕ್ಕೆ ಪ್ರೋತ್ಸಾಹ ನೀಡಿದ. ದಾವಣಗೆರೆಯ ಮೂಲಕ ಹೋಗುವ ರೈಲುಮಾರ್ಗ ಆರಂಭವಾದ ಮೇಲೆ ಇದು ಶೀಘ್ರವಾಗಿ ಬೆಳೆಯಿತು.
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ